Wednesday, March 11, 2009

ಪ್ರತ್ಯುತ್ತರ

ಒಂದು ವರುಷದ ಹಿಂದೆ ನಾನು ಮತ್ತು ನನ್ನ ಹುಬ್ಬಳ್ಳಿಯ ರೆಡ್ಡಿ ಹಾಸ್ಟೆಲ್ ಸ್ನೇಹಿತ (ಪ್ರೆಂಡು!) ಇಬ್ಬರೂ ಸೇರಿ ಒಂದು ಮನೆಯನ್ನ ಬಾಡಿಗೆ ತೆಗೆದುಕೊಳ್ಳುವುದು ಎಂದು ತೀರ್ಮಾನಿಸಿದೆವು.
ನಾವುಗಳೆಲ್ಲ ಮೊದಲು ಇದ್ದದ್ದು ೧ ಬೆಡ್ ರೂಮಿನ ಒಂದು ಚಿಕ್ಕ ರೂಮಿನಲ್ಲಿ (ಹೆಸರಿಗೆ 1 ಬೆಡ್ ರೂಮು, ಸುಮಾರಾದ ಒಂದು ಬೆಡ್ ರೂಮಿನ ನಡುವೆ ಒಂದು ಗೋಡೆಯನ್ನ ಕಟ್ಟಿ ಒಂದು ಭಾಗವನ್ನ ಅಡುಗೆ ಮನೆ ಹಾಗೂ ಇನ್ನೊದು ಭಾಗವನ್ನ ಬೇಡ್ರೂಮೆಂದು ನಾಮಕರಣ ಮಾಡಿ ಬಾಡಿಗೆಗೆ ಬಿಡುತ್ತಾರೆ...!!). ಅಸ್ಟು ದೊಡ್ಡ ಮನೆಯಲ್ಲಿ ನಾವೆಲ್ಲಾ ಸೇರಿ ಇದ್ದು ಆರೇ ಆರು ಜನ!! ತಿಂಗಳಿಗೊಮ್ಮೆ ನಮ್ಮ ಪರಿಚಿತರೋ, ನಮ್ಮ ಸ್ನೇಹಿತರ ಪರಿಚಿತರೋ, ಪರಿಚಿತರಿಗೆ ಪರಿಚಯವಿರುವ ಪರಿ-ಪರಿಚಿತರೋ ಅಥವಾ ಸಂಭಂದಿಗರೋ, ಒಟ್ಟಿನಲ್ಲಿ ಯಾರಾದರು ಸ್ವಲ್ಪ ಜನ ಬೆಂಗಳೂರಿಗೆ ಕೆಲಸ ಹುಡುಕುವ ಕು-ಕಾರ್ಯಕ್ಕೆ ಬಂದಾಗ, ತಮಗೆ ಇನ್ನೊಂದು ಠಿಕಾಣಿ ಸಿಗುವ ವರೆಗೆ ನಮ್ಮ ರೂಮಿನಲ್ಲಿ ತಂಗುವುದಾಗಿ ಹೇಳಿಕೊಂಡು ಬರುತ್ತಿದ್ದರು. 2 ದಿನಕ್ಕೆ ಅಂತ ಬಂದವರು 2 ತಿಂಗಳುಗಳಾದರೂ ಹೋಗದೆ ಇದ್ದಾಗ ನಾವುಗಳೆಲ್ಲ ಅವರನ್ನು ಓಡಿಸಲು ಮಾಡುತ್ತಿದ್ದ ಕಸರತ್ತುಗಳದ್ದೆ ಒಂದು ದೊಡ್ಡ ಕಥೆಯಾಗುತ್ತೆ.
ಮೊದಲೇ ತಲೆ ಕೆಟ್ಟು ರೂಮಿಗೆ ಬರುತ್ತಿದ್ದ ನಾವು ಇಂಥಹ ಪರಿಸ್ಥಿತಿಯಲ್ಲಿ ಮಾನಸಿಕ ರೋಗಿಗಳಾಗುವ ಎಲ್ಲ ಗುಣಲಕ್ಷಣ ಒಂದೊಂದಾಗಿ ಗೊತ್ತಾದಾಗ, ಹಾಗೂ ಬೆಂಗಳೂರೆಂಬ ಜನ ತುಂಬಿದ ಹಾಳುಕೊಂಪೆಯಲ್ಲಿ ಕಛೇರಿಯಿಂದ ಸಜೆ ಮನೆಗೆ ಬಂದ ಕೂಡಲೇ ನೆಮ್ಮದಿ ಯಾಗಿ ಕಾಲ ಕಳೆಯಲು ಬೇರೆ ಮನೆಯನ್ನು ಮಾಡುವುದೆಂದು ಬಾಂಡ್ ಪೇಪರ್ ಮೇಲೆ ಸಹಿ ಮಾಡಿದೆವು. ಸಮಯಕ್ಕೆ ಸರಿಯಾಗಿ ಕೆಲಸ ಮಾಡುವ ಕಂಪನಿಯಲ್ಲಿ ನಮ್ಮಿಬ್ಬರ ಅನುಭವದ ಆಧಾರದ ಮೇಲೆ, ಬರುವ ಪಗಾರದಲ್ಲಿ ಏರಿಕೆಯಾಗಿದ್ದೂ ಇದಕ್ಕೆ ಕಾರಣವಾಗಿತ್ತು. ಹೀಗೆ ಈ ಮನೆಗೆ ನೆಮ್ಮದಿ ಅರಸುತ್ತ ಬಂದ ನಾವುಗಳು ಹಾಸ್ಟೆಲ್ ಮೆಟ್ ನಿಂದ ರೂಮ್ ಮೆಟ್ ಗಳಾಗಿ ಬಡ್ತಿ ಪಡೆದೆವು.

ಕಾರಣಾಂತರಗಳಿಂದ ನಾನು ಮತ್ತೆ ಮತ್ತೆ ಪ್ರವಾಸ ಮಾಡಿ, ಸರಿಯಾಗಿ ಒಂದು ತಿಂಗಳೂ ಕೂಡ ಈ ಹೊಚ್ಚ ಹೊಸ ಮನೆಯಲ್ಲಿ ಇರಲಾಗಿಲ್ಲ, ಆದರೆ ಬಾಂಡ್ ಪೇಪರ್ ಮೇಲೆ ಸಹಿ ಮಾಡಿದ (!) ಕಾರಣದಿಂದ ಒಂದೇ ಒಂದು ತಿಂಗಳು ಕೂಡ ತಪ್ಪಿಸದೇ ಬಾಡಿಗೆಯನ್ನ ನಾನು ನನ್ನ ರೂಮ್ ಮೇಟಿನ ಬ್ಯಾಂಕ್ ಖಾತೆಗೆ ಜಮ ಮಾಡುತ್ತೇನೆ. ಈ ಸಾರಿಯೂ ಕೂಡ ನಾನು ಹೀಗೆ ಮಾಡಿದಾಗ ನನ್ನ ಗೆಳೆಯ ನಾದ ರೂಮ್ ಮೆಟ್ ಸಂತಸದಿಂದ ಒಂದು ಪತ್ರ ಬರೆದ..ಅದಕ್ಕೆ ಪ್ರತ್ತ್ಯುತ್ತರವಾಗಿ ನಾನು ಬರೆದ ಪತ್ರವೇ ಇದು!. ಇಲ್ಲಿ ನನ್ನ ಮಿತ್ರ ರಫಿಯ ಪತ್ರಯೂ ಇದೆ :) (ಕೊ೦ಡಿಯ ಮೇಲೆ ಕ್ಲಿಕ್ಕಿಸಿ)

------------------------------------------------------------------------------------------------

ಪರಮ ಪ್ರಿಯ ಸ್ನೇಹಿತ ರಫಿಕಾ ಆ ಆ ಆ....

ಆ ದೇವರ ಲೀಲೆಯೇ ವಿಚಿತ್ರ ನೋಡು...

ದೇವರು ತಾನು ಎಲ್ಲ ಕಡೆ ಇರಲಾಗುವುದಿಲ್ಲ ಎಂಬ ಕಾರಣಕ್ಕೆ ತಾಯಿಯನ್ನು ಸೃಷ್ಟಿ ಮಾಡಿದನಂತೆ, ಹಾಗೆಯೇ ತಾಯಿಯೂ ಕೂಡ ಮಕ್ಕಳ ಜೊತೆ ಎಲ್ಲ ಸಮಯದಲ್ಲಿ ಇರಲಾಗುವುದಿಲ್ಲ ಎಂದು ಸ್ನೇಹಿತರನ್ನ ಸೃಷ್ಟಿ ಮಾಡಿದನಂತೆ!

ನಿನ್ನ ಪ್ರತ್ಯುತ್ತರ ಓದಿದ ಕೂಡಲೇ ನನಗೂ ಕೂಡ....ಏನೋ ಅನಿಸಿತು....!! ನನಗೆ ಅನಿಸಿದ್ದು ಏನು ಅನ್ನುವುದನ್ನು ತಿಳಿಯಲು, ನಾನು ಶಾಲೆಯಲ್ಲಿ ಕಲಿತ, ಅಲ್ಲಿ, ಇಲ್ಲಿ, ಗಲ್ಲಿ ಗಲ್ಲಿ ಯಲ್ಲಿ, ಚಿಂದಿ ಪೇಪರ್ ನಲ್ಲಿ ಓದಿದ ಎಲ್ಲ ತರಹದ ಭಾವನೆಗಳಿಗೆ ಹೋಲಿಸಿ ನೋಡಿದೆ...ಯಾವುದಕ್ಕೂ ಹೋಲಿಕೆ ಬರಲಿಲ್ಲ...!! ಒಟ್ಟಿನಲ್ಲಿ....ಅನಿಸಿತು!

ಇಂತಹ ಸ್ನೇಹಭರಿತ(!!) ಪತ್ರವನ್ನ ಓದಿದ ಮೇಲೆ, ದೇವರು ಇಂತಹ ಸ್ನೇಹಿತರನ್ನೂ ಸೃಷ್ಟಿ ಮಾಡಿದ...ಯಾಕೋ!!? ಎಂಬ ಪ್ರಶ್ನೆ ಅಪ್ರಯತ್ನಪೂರ್ವಕವಾಗಿ ಉದ್ಭವವಾಗಿ...ಉತ್ತರ ತಿಳಿಯಲಾಗದೆ ಉದ್ವೇಗಗೊಂಡಿದ್ದೇನೆ.

ವಿ. ಸೂ :-
ಉದ್ವೇಗ -> ಕನ್ನಡದಲ್ಲಿ ಇದಕ್ಕೆ 'ಟೆನ್ಶನ್' ಎನ್ನುತ್ತಾರೆ! ಹಾಗೂ 'ಉದ್ಭವ' ಎಂಬುದಕ್ಕೆ 'Raise' ಎನ್ನುತ್ತಾರೆ.

ಪ್ರತಿ ತಿಂಗಳ ಶುರುವಾತಿಗೆ, ನನ್ನ ಬ್ಯಾಂಕ್ ಖಾತೆಗೆ ಸರಿಯಾಗಿ 3 ದಿನ ತಡವಾಗಿ ನಮ್ಮ ಕಂಪೆನಿಯವರು, ನಾಯಿಗೆ ಹಾಕುವ ಬಿಸ್ಕೆಟ್ ತರಹ ಸ್ವಲ್ಪ ದುಡ್ಡು ಎಸೆಯುತ್ತಾರೆ...(ಮತ್ತೊಮ್ಮೆ ಮೊದಲೆರಡು ಶಬ್ದ ಓದು 'ಪ್ರತಿ ತಿಂಗಳು' - ಯಾಕೆಂದರೆ ಇದು ಪ್ರತಿ ತಿಂಗಳ ನಾಟಕ, ಪ್ರತಿಯೊಬ್ಬ ಕೆಲಸಗಾರರ ಪಗಾರವನ್ನ(ನೂರಾರು ಕೋಟಿಗಳಲ್ಲಿದೆ) 3 ದಿನ ತಡೆಹಿಡಿದರೆ ಅವರಿಗೆ ಎಷ್ಟು ಬಡ್ಡಿ ಬರುವುದೋ ಏನೋ..ದೇವರೇ ಬಲ್ಲ!). ಆ ಬಿಸ್ಕೆಟ್ ನಲ್ಲಿ 4 ನೆ ದಿನ ನಾನು ಯಾರಿಗೆ ಎಸ್ಟ್ ಹಂಚಬೇಕು ಎಂದು ಲೆಕ್ಕ ಹಾಕುವುದರಲ್ಲಿ ಕ್ರೆಡಿಟ್ ಕಾರ್ಡಿನವರು ಅರ್ಧ ಬಿಸ್ಕೆಟ್ ತಿಂದು ಮುಗಿಸುತ್ತಾರೆ...ಉಳಿದ ಅರ್ಧ ದಲ್ಲಿ...ನಾನು ತಿಂದು ಉಳಿದವರಿಗೆ ನಾನೂ ಹಂಚಲೂ ಬಹುದಾ ಎಂಬ ಬಹುಜನರ, ಬಹುಮತದ ಎಲ್ಲರೂ ಅನುಮೋದಿಸುವ ಸಮಸ್ಸ್ಯಾಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ. ನನ್ನ ಹೊಟ್ಟೆಯ ಚಿಂತೆಯನ್ನೂ ಮಾಡದೆ, ನಿನ್ನ ಜೊತೆಗೆ ನನ್ನ ಮನೆಯನ್ನು (ತಿರುಗಿಸಿ ಓದಿದರೆ ಚೆನ್ನ ಅನಿಸುತ್ತದೆ :) ) ಹಂಚಿಕೊಂಡಿರುವ ಪ್ರೀತಿಗೆ (!!) ಹಾಗೂ ನಿನ್ನ ಸಹಬಾಡಿಗ ನಾಗಿ ಬಾಡಿಗೆ ಯನ್ನು ಕೊಡಲೇಬೇಕಾದ ಅನಿವಾರ್ಯ ಧ(ಕ)ರ್ಮ ಕ್ಕೆ ಅಳಿದುಳಿದ ತುಂಡನ್ನು ನಿನಗೆ ರವಾನಿಸುತ್ತೇನೆ. (ಇಸ್ಟೆಲ್ಲಾ ಬರೆಯುತ್ತಿರಬೇಕಾದರೆ ಮತ್ತೆ ಮತ್ತೆ ನನಗೆ ಏನೋ ಸಂಕಟ ದ ಅನುಭವವಾಗುತ್ತಿದೆ!!)

ವಿ. ಸೂ :- ಪಗಾರ -> ಅಂದರೆ ಕನ್ನಡದಲ್ಲಿ 'ಸ್ಯಾಲರಿ' ಎಂದು ಕರೆಯುತ್ತಾರೆ!

ನೀನು ಚಂದೀಘಡದಿಂದ ಬೆಂಗಳೂರಿಗೆ ಬರುವ ವರೆಗೆ ನಾವೆಲ್ಲಾ ಸ್ನೇಹಿತರು ಇಲ್ಲಿಯೇ (ಬೆಂಗಳೂರಿನಲ್ಲಿ) ತಳ ಊರಿ 2.5 ವರ್ಷವಾಗಿತ್ತು....ಇವತ್ತಿಗೆ ಸರಿ ಸುಮಾರು 5 ವರ್ಷಗಳಾಗುತ್ತವೆ. ನಮ್ಮ ಗುಂಪಾದ D.C.H ಎಲ್ಲ ಕೂಡಿ ನಾವು ರೆಡ್ಡಿ ಹಾಸ್ಟೆಲ್ನಲ್ಲಿ ಕಳೆದ ದಿನಗಳ ...ಹಾಗು, ನಾನು ನನ್ನ ಇನ್ನಿಬ್ಬರು ಗುಂಪಿನ ಸ್ನೇಹಿತರ ಜೊತೆ ನಾವು ಕರ್ನಾಟಕ ಯುನಿವೆರ್ಸಿಟಿ ಯಲ್ಲಿ ಕಳೆದ ದಿನಗಳ ನೆನಪಿನ ಮೆಲುಕು ಹಾಕುತ್ತ 5 ವರ್ಷ ಕಳೆದದ್ದು ಗೊತ್ತೇ ಆಗಲಿಲ್ಲ...!(ಈಗೀಗ ನಾವೆಲ್ಲಾ ಸೇರಿದಾಗ ತಲೆ ಬಿರಿಯುವ ಹಾಗೆ ವಿಚಾರ ಮಾಡುವ ಮಗದೊಂದು ಪ್ರಶ್ನೆ "ಈ 5 ವರ್ಷ ನಾವೆಲ್ಲಾ ಇಲ್ಲಿ ಸಾಧನೆ ಮಾಡಿದ್ದು (---ಕೊಂಡಿದ್ದು) ಏನೂ?" ಎಂಬ ಮತ್ತೊಂದು ಯಕ್ಷಪ್ರಶ್ನೆಗೆ ಉತ್ತರದ ಹುಡುಕಾಟ ಜಾರಿಯಲ್ಲಿದೆ.).

ನನ್ನ ಈ ಹೊಸ ಕಂಪನಿ ಸೇರಿದ ಮೇಲೆ ನನಗೆ ಕಂಪೆನಿಯವರು ನನ್ನ ಕಾಲಿಗೆ ಚಕ್ರಗಳನ್ನ ಕಟ್ಟಿಬಿಟ್ಟರು ಹಾಗಾಗಿ ನಾನು ಅಲ್ಲಿ ಇಲ್ಲಿ ಓಡುತ್ತಲೇ ಇದ್ದೇನೆ. ಮೊದಲಿಗೆ ನಾನು ಬೆಂಗಳೂರಿಗೆ ಬಂದಾಗ ಯಾವುದಾದರು ಒಬ್ಬ ಗುಂಪಣ್ಣ ನ (ನಮ್ಮ ಗುಂಪಿನ ಸದಸ್ಸ್ಯ) ಜೊತೆ ಇರುತ್ತಿದ್ದೆ ಕಾಲ ಬದಲಾಗಿ ಈಗ ಇಸ್ಟೆಲ್ಲಾ ಕಥೆಯ ತಿರುವುಗಳಲ್ಲಿ (ಯಾವ ಕಥೆ ಹಾಗೂ ಯಾವ ಯಾವ ತಿರುವುಗಳು ಎನ್ನುವುದರ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ) ಒಬ್ಬೊಬ್ಬರು ಒಂದೊಂದು ಮನೆ(!) ಸೇರಿಕೊಂಡ ಮೇಲೆ, ಹಾಗೂ ನಾನು ಬೆಂಗಳೂರಿಗೆ ಬಂದಾಗ ಸ್ವಲ್ಪ ದಿನದ ಮಟ್ಟಿಗೆ ಬಿದ್ದುಕೊಳ್ಳಲು ಸ್ವಲ್ಪ ಜಾಗೆಯ ಅವಶ್ಯಕತೆಯನ್ನ ಮನವರಿಕೆ ಮಾಡಿಕೊಂಡು, ನಿನ್ನ ಜೊತೆ ಸುಂದರವಾದ (ಸುಂದರವಾಗಿದ್ದ--!! ) ಬಸವನಗುಡಿ ಎಂಬ ಊರಿನಲ್ಲಿ, ಶಾಂತಿಯಿಂದರಲು(!!) ನಾವಿಬ್ಬರೂ ಸೇರಿ ಆಯ್ಕೆ ಮಾಡಿಕೊಂಡ ಮನೆಗೆ ಬಾಡಿಗೆ ಕೊಡಲೇಬೇಕಾದ ಸಂತಸವನ್ನ ನಾನು ಅದಾವ ಸುಂದರ ಶಬ್ದಗಳಿಂದ ವರ್ಣಿಸಲಿ..? ತಿಳಿಯುತ್ತಿಲ್ಲ...

ನಾವುಗಳು ಕತ್ತೆಯಂತೆ (ಪಾಪದ ಕತ್ತೆಗೆ ಹೊಲಿಸಬೇಕ ನಾವು) ದುಡಿಯುವುದು ನಮ್ಮ ಮಾವಂದಿರ ಕಚೇರಿಯಾಗಿರದೆ ಇರುವುದರಿಂದ, ಸಣ್ಣ ಪುಟ್ಟ (ಬರಿ ಮಾತಿಗೆ 'ಸಣ್ಣ ಪುಟ್ಟ' ಬಳಸಿದ್ದನ್ನು ಅರ್ಥ ಮಾಡಿಕೊಳ್ಳಬೇಕು) ರಾಜಕಾರಣ ಹಾಗೂ ರಾಜಕಾರಣಿಗಳು ಇದ್ದೆ ಇರುತ್ತ ವೆ/ರೆ. ಹೀಗಾಗಿ ನೀನು ಯಾವುದನ್ನು ಮನಸಿನಲ್ಲಿ ಇಟ್ಟುಕೊಳ್ಳದೆ, ಬರಿ ೧೮ ಘಂಟೆ ಕೆಲಸ ಮಾಡಿದರೆ ಸಾಕು ಎನ್ನುವುದು ನನ್ನ ಅನಿಸಿಕೆ.

ವಿ ಸೂ :- 'ಕಚೇರಿಗೆ' ಕನ್ನಡದಲ್ಲಿ 'ಆಫೀಸ್' ಎಂಬ ಅರ್ಥವೂ ಇದೆ.

ನಮ್ಮ ದೇಶದಲ್ಲಿ ಸಂಪನ್ಮೂಲಗಳ ಕೊರತೆ ಇರದೇ ಇರುವುದರಿಂದ...ಆದರೆ ಸಂಪನ್ಮೂಲಗಳು ಬೇರೆಯವರಿಗೆ ಹಾಗೂ ಬೇರೆ ದೇಶಗಳಿಗೆಲ್ಲ ಉಪಯೋಗವಾಗಲಿ ಎಂದು ನಾವು ಉದಾರ ಮನಸಿನಿಂದ ಅವುಗಳನ್ನ ಬೇರೆಯವರಿಗೆ ಕೊಟ್ಟು ಬದುಕುತ್ತೇವೆ ಯಾದ್ದರಿಂದ ವಿದ್ಯುತ್ ಶಕ್ತಿಯ ಪೂರೈಕೆ ತುಂಬಾ ಉತ್ತಮ ಗುಣಮಟ್ಟದಲ್ಲಿದೆ. ಇದು ನಿನಗೆ ತಿಳಿಯದ ವಿಚಾರವೇನಲ್ಲ. ಸಂಭಾಳಿಸಿಕೊಂಡು ಹೋಗು.

ವಿ ಸೊ :-
ಸಂಭಾಳಿಸಿಕೊಂಡು ಹೋಗುವುದು ಎಂದರೆ ಕನ್ನಡದಲ್ಲಿ 'ಕಾಂಪ್ರೋಮೈಸ್' ಎಂದು ಅರ್ಥ.

ಮುಬೈಯಂಥಹ ಘಟನೆಗಳು ನಮಗೆ, ನಮ್ಮ ಜನಕ್ಕೆ, ನಮ್ಮ ಸರಕಾರಕ್ಕೆ, ನಮ್ಮ ನಾಯಿಗಳಿಗೆ, ಬೆಕ್ಕುಗಳಿಗೆ, ಇಲಿಗಳಿಗೆ ..ಒಟ್ಟಿನಲ್ಲಿ ಭಾರತದ ಪ್ರತಿ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಜಂತು, ಹುಳು ಇವೆಲ್ಲವಕ್ಕೆ ಹೊಸದೇನಲ್ಲ. ಹಾಗೂ, ಜಗತ್ತಿನಲ್ಲಿ ಯಾವ ಜೀವಿಯ ಜೀವನವೂ/ಜೀವವೂ ಮಹಾನ್ ಏನಲ್ಲ. ಹುಟ್ಟಿದ ಎಲ್ಲವು ಸಾಯಲೇಬೇಕು, ಹೀಗಾಗಿ ಇಂಥಹ ಕ್ಷುಲ್ಲಕ ವಿಷಯಗಳ ಬಗ್ಗೆ ಪತ್ರದಲ್ಲಿ ಬರೆಯಬೇಡ. ಕಸಬ್ ನಂತಹ ಮಹಾನ್ ವ್ಯಕ್ತಿಗಳು ನಮ್ಮ ರಾಜಕೀಯ ಪಕ್ಷಗಳಿಗೆ ಮಾದರಿಯಾಗುವ ಸಮಯ ಬಂದಿದೆ, ಹೀಗಾಗಿ ಅವರೆಲ್ಲ ಅದೇ ದಾರಿಯಲ್ಲಿ ನಡೆಯುವ ಪ್ರಮಾಣ ವಚನ ಸ್ವೀಕರಿಸಿದ್ದರೆಂಬ ಸುದ್ದಿ ನಿನಗೆ ಗೊತ್ತಿಲ್ಲದ್ದೇನಲ್ಲ!. ಯಾವುದೇ ಪಕ್ಷ ಈ ದಾರಿಯಲ್ಲಿ ನಡೆಯದೇ, ಅಭಿವೃದ್ದಿಯ ಕಡೆ ಗಮನ ಕೊಡುತ್ತದೋ ಅಂತಹ ಪಕ್ಷವನ್ನ ಅಥವಾ ವ್ಯಕ್ತಿಯನ್ನ ನಾವು ಆರಿಸಿ ಕಳಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನ ನಮ್ಮ ದೇಶದ ಮತದಾರ (ಭಾಂದವರು) ಮಾಡ್ಬೇಕು ಅಥವಾ ಮಾಡಬಹುದು ಎಂಬ ಗುಮಾನಿ ಹರಡಿದೆ, ಇದೂ ಕೂಡ ನಿನಗೆ ಗೊತ್ತಿದ್ದೇ ಇರುತ್ತದೆ. ದಯವಿಟ್ಟು ಚಿಂತಿಸಬೇಡ.

ಸದ್ಧ್ಯಕ್ಕೆ ನಮಗೆಎಲ್ಲ ಮುಕ್ತಿ...(ಯಾವುದದರಿಂದ ಮುಕ್ತಿ ಎಂದು ಕೇಳಬೇಡ.....ಸಾಕಷ್ಟಿವೆ, ಬೇಕಾಗಿದ್ದನ್ನು ಆಯ್ದುಕೋ!) ಸಿಗಲಿ...ಹಾಗೂ, ನಮ್ಮಿಬ್ಬರ ಮನೆ ಬಾಡಿಗೆಯನ್ನು ನೀನೊಬ್ಬನೇ ಕೊಡುವಂತಾಗಲಿ ಎಂದು ಹಾರೈಸುತ್ತ ಈ ಪ್ರತ್ಯುತ್ತರ ಇಲ್ಲಿಗೆ ಮುಗಿಸುತ್ತೇನೆ.

ಇಂತಿ ನಿನ್ನ ಪ್ರೀತಿಯ (ಚಲನಚಿತ್ರವಲ್ಲ!) ಹಾಗೂ ನಂಬುಗೆಯ,
ಮಲ್ಲಿಕಾರ್ಜುನ

ವಿ ಸೂ :-
ನಂಬುಗೆ ಅಥವಾ ನಂಬಿಕೆಗೆ ಕನ್ನಡದಲ್ಲಿ 'trust' ಅಥವಾ faithful' ಎಂದು ಕರೆಯುತ್ತಾರೆ.

ಕೊನೆಯ ಸಾಲು: --> "ವಿ ಸೂ" ಎಂದರೆ 'ವಿಶೇಷ ಸೂಚನೆ' ಎಂದರ್ಥ!!

3 comments:

Unknown said...

ನಿಮ್ಮ ಬ್ಲಾಗ್, ಅದರಲ್ಲಿನ ಬರಹಗಳು ವಿಭಿನ್ನವಾಗಿವೆ ಹಾಗೂ ಮನಸೆಳೆಯುತ್ತವೆ. ನನ್ನದೊಂದು ಕೋರಿಕೆ. ನೀವು ಪೋಸ್ಟ್ ಮಾಡುವ ಮೊದಲು ಮತ್ತೊಮ್ಮೆ ಮಗದೊಮ್ಮೆ ಸ್ಪೆಲ್ಲಿಂಗ್ ಚೆಕ್ ಮಾಡಿಬಿಡಿ. ಇಲ್ಲದಿದ್ದರೆ ಸರಾಗ ಓದಿಗೆ ತೊಂದರೆಯಾಗುತ್ತದೆ

Anonymous said...

@ ಸತ್ಯನಾರಾಯಣ್ - ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಧನ್ನ್ಯವಾದಗಳು. ನಿಮ್ಮ ಸಲಹೆಗೂ ಕೂಡ, ಇನ್ನು ಮುಂದೆ ಮತ್ತಷ್ಟು ಕಾಳಗಿ ವಹಿಸುತ್ತೇನೆ.

Prabhuraj Moogi said...

ನಿಮ್ಮ ಹಾಗೂ ನಿಮ್ಮ ಗೆಳೆಯನ ಪತ್ರ ಎರಡೂ ಓದಿದೆ(ಹಿಂದೆಯೂ ಓದಿದ್ದೆ ಕಮೇಂಟು ಬರೆಯಲಾಗಿರಲಿಲ್ಲ), ಬಹಳ ಚೆನ್ನಗಿದೆ ನಿಮ್ಮ ಪತ್ರ ಸಂಭಾಷಣೆ, ಗೆಳೆತನದ ಸ್ವಾದ ಸವಿಯಯಬಹುದು ಲೇಖನದಲ್ಲಿ, ಓದಿಸಿಕೊಂದು ಹೋಗುವ ಹಾಗೆ ಬರೆಯುತ್ತೀರಿ... ಮತ್ತೆ ಇತ್ತೀಚೆಗೆ ಏನೂ ಬರೆದಿಲ್ಲ, ಸರ್ ಬಿಡಬೇದಿ ಬರೆಯಿರಿ ಬಹಳ ಚೆನ್ನಾಗಿ ಬರೆಯುತ್ತೀರಿ ನಾವು ಓದುತ್ತೀವಿ..